ಕಾಶೀನಾಥ ಶಾಸ್ತ್ರಿ

 1825-1950. ಸ್ವಯಂ ಉಭಯಭಾಷಾ ವಿದ್ವಾಂಸರಾಗಿದ್ದು ಸುಮಾರು ಎಪ್ಪತ್ತಕ್ಕೂ ಹೆಚ್ಚಿನ ಕನ್ನಡ-ಸಂಸ್ಕøತ ಗ್ರಂಥಗಳ ಪ್ರಕಾಶಕರಾಗಿದ್ದು ಹೆಸರು ಗಳಿಸಿದ ಕನ್ನಡಿಗರು ಧಾರವಾಡ ಜಿಲ್ಲೆ ಗದಗ ತಾಲ್ಲೂಕು ನಾರಾಯಣಪುರದಲ್ಲಿ ಹುಟ್ಟಿದರು; ನಾಗವ್ವ ಮತ್ತು ಸಿದ್ಧಯ್ಯ ತಾಯಿ ತಂದೆಯರು ಇವರು ಮೊದಲು ಅಬ್ಬಿಗೇರಿ ಸೊಲ್ಲಾಪುರಗಳ ಸಂಸ್ಕøತ ಪಾಠಶಾಲೆಗಳಲ್ಲಿ ಅಭ್ಯಾಸ ಮಾಡಿ ತರುವಾಯ ವಾರಾಣಸಿಯಲ್ಲಿ ಕಾವ್ಯತೀರ್ಥ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ವಾಗ್ಮಿಗಳೂ ಪ್ರಬುದ್ಧ ಲೇಖಕರೂ ಆದ ಶಾಸ್ತ್ರಿಗಳು ಮೈಸೂರು ರಾಜಧಾನಿಯಲ್ಲಿ ಪಂಚಾಚಾರ್ಯ ಪ್ರಭಾ ಎಂಬ ವಾರಪತ್ರಿಕೆಯನ್ನು ಆರಂಭಿಸಿ (1923) ವೀರಶೈವ ಧರ್ಮದ ಅನೇಕ ಗ್ರಂಥಗಳನ್ನು ಪ್ರಕಟಿಸಿದರು. ಕಾಶೀನಾಥ ಗ್ರಂಥಮಾಲೆಯಲ್ಲಿ ನಂದಿಕೇಶ್ವರಕಾರಿಕಾ, ಶ್ರೀಕರಭ್ಯಾಷ (ಚತುಸ್ಸೂತ್ರೀ), ವೈದಿಕವಾಙ್ಮಯ ರಹಸ್ಯ, ಶೈವೋಪನಿಷತ್ಸಂಗ್ರಹ, ಶಿವಾದ್ವೆೃತ ಮಂಜರೀ-ಮುಂತಾದ ಸುಮಾರು 70 ಗ್ರಂಥಗಳು ಪ್ರಕಟವಾಗಿವೆ. ಇವರು ಸ್ಥಾಪಿಸಿದ ಪಂಚಾಚಾರ್ಯ ಎಲೆಕ್ಟ್ರಿಕ್ ಪ್ರೆಸ್ ಮೈಸೂರಿನಲ್ಲಿ ಇಂದಿಗೂ ಅಸ್ತಿತ್ವದಲ್ಲಿದೆ.           

   (ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ